ಅರಿವು 2

ಅರಿವುಗಳು ನಮ್ಮ ಮೈಯ ಹೊರಗಣ ಪ್ರಪಂಚದ ತಿಳಿವಳಿಕೆಯನ್ನೇ ಅಲ್ಲದೆ, ಮೈ ಒಳಗೂ ಆಗುತ್ತಿರುವುದನ್ನೂ ತಿಳಿಸಿಕೊಡುವುವು. ನಮ್ಮ ಮೈ ಸರಿಯಾಗಿದೆಯೋ ಇಲ್ಲವೋ ಗೊತ್ತಾಗುವುದೂ ಇವುಗಳಿಂದಲೇ, ಅಚ್ಚ ಅರಿವು ಕೇವಲ ಮನಸ್ಸಿನ ಕಲ್ಪನೆ, ಎಳೆಗೂಸಿನ ಅನುಭವವದು. ಆದರೆ ಬರಬರುತ್ತ ಅನುಭವಗಳೊಂದಿಗೆ ಸೇರಿಕೊಂಡು ಅರಿವುಗಳಿಗೆ ಬೇರೆ ಬೇರೆ ಅರ್ಥಗಳು ಬರುತ್ತವೆ. ಅಂಥ ಅನುಭವಗಳನ್ನು ಕಣ್ಣರಿಕೆಗಳು (ಪರ್ಸೆಪ್ಷನ್ಸ್) ಎನ್ನಬಹುದು. ಕಣ್ಣಿಗೆ ಕಂಡಿದ್ದರಿಂದ ನಾವು ಅರಿವನ್ನು ಜೋಡಿಸುವುದು ಸಾಮಾನ್ಯ. ಆದರೆ ನಮಗೆ ತೋರಿಬರುವ ಅರಿವುಗಳು ಕೆಲವು ಸಮಯಗಳಲ್ಲಿ ನಮ್ಮನ್ನು ತಪ್ಪು ದಾರಿಗೆ ಎಳೆಯಬಹುದು.

ಎಲ್ಲ ಪ್ರಾಣಿಗಳೂ ಅರಿವಿಗೆ ಈಡಾಗುವಂತಿದ್ದರೂ ಅವುಗಳ ಬೇಡಿಕೆಗಳಿಗೆ ತಕ್ಕಂತೆ ಅರಿವಿನ ಆಳವು ಹೆಚ್ಚು ಕಡಿಮೆ ಅಗುವುದು. ನೋಟದ, ಆಲಿಸುವ ಅರಿವುಗಳು ಕೆಲವು ಪ್ರಾಣಿಗಳಲ್ಲಿ ಇರುವಷ್ಟು ಮಾನವನಲ್ಲೂ ಇರವು. ಕ್ರಿಮಿಕೀಟಗಳಲ್ಲಿ ಮುಟ್ಟುವ ಅರಿವು ಎಲ್ಲಕ್ಕೂ ಮುಖ್ಯ. ಒಟ್ಟಿನಲ್ಲಿ, ಬುದ್ದಿವಂತಿಕೆಯ ಹೆಚ್ಚಳಿಕಗೆ ನೋಡುವುದು ಕೇಳುವುದೂ ಬಲಗೊಂಡು, ಉಳಿದವು ಅಷ್ಟಾಗಿ ಮುಖ್ಯವಾಗಿರವು. ಹೀಗೆ, ಮೂಸುವುದರಲ್ಲಿ ನಾಗರಿಕ ಮಾನವ ತೀರ ಹಿಂದುಳಿದಿದ್ದಾನೆ.

ಅರಿವಿನ ಲಕ್ಷಣಗಳು: ಗುಣ, ತೀವ್ರತೆ, ಅವಧಿ, ಹರವು(ಇವು ಅರಿವಿನ ಮುಖ್ಯ ಲಕ್ಷಣಗಳು. ಬಗೆಬಗೆಯ ಅರಿವುಗಳನ್ನೆಲ್ಲ ಮೈಯಲ್ಲಿರುವ ವಿಶೇಷೀಕೃತ ಅಂಗಾಂಶಗಳಾದ (ಎಂಡಾರ್ಗನ್ಸ್) ಪಡೆಕಗಳು (ರಿಸೆಪ್ಟಾರ್ಸ್) ಗುರುತಿಸುತ್ತವೆ. ಬೇರೆ ಬೇರೆ ಅರಿವುಗಳಿಗೆ ಬೇರೆ ಬೇರೆ ಪಡೆಕಗಳಿವೆ. ಚೋದನೆಯಾದಾಗ ಪಡೆಕಗಳು ಅರಿವಿನ ನರಗಳ ಮೂಲಕ ನರದ ಆವೇಗಗಳನ್ನು (ಇಂಪಲ್ಸಸ್)ಕಳುಹಿಸುತ್ತವೆ. ಮಿದುಳಲ್ಲಿರುವ ಅರಿವಿನ ವಿಭಾಗಕ್ಕೆ ಆವೇಗಗಳು ತಲುಪಿದಾಗ ಮಾತ್ರ ಅ ಒಂದು ಅರಿವಿನ ಅನುಭವ ಆಗುತ್ತದೆ. ಬೇರೆ ಬೇರೆ ಬಗೆಗಳ ಚೋದನೆಗಳನ್ನು ಪಡೆವ ಬಗೆಬಗೆಯ ಪಡೆಕಗಳು ಎಲ್ಲ ತೆರೆನ ಚೋದನೆಳಿಗೂ ಈಡಾಗುತ್ತವೆ. ಹೀಗಿದ್ದರೂ ಒಂದೊಂದು ಪಡೆಕ ವಿಶೇಷವಾಗಿ ಯಾವುದಾದರೂ ಒಂದು ಬಗೆಯ ಚೋದನೆಯನ್ನು ಪಡೆಯುವುದು. ಆಯಾ ಇಂದ್ರಿಯ ಮತ್ತದರ ನರಗಳಂತೆ ಅರಿವಿನ ಗುಣ ಇರುತ್ತದೆ. ಕಣ್ಣೊಳಗಿರುವ ನೋಟದ ಪೆಡೆಕಗಳಾದ ಸರಳುಗಳು, ಸಂಕಗಳು (ರಾಡ್ಸ್, ಕೋನ್ಸ್)ಇದರ ಉದಾಹರಣೆ, ಬೆಳಕಿನ ಕಿರಣಗಳು ಇವುಗಳ ಮೇಲೆ ಬಿದ್ದಾಗ ಚೋದಿಸುತ್ತವೆ. ಕಣ್ಣು ಮುಚ್ಚಿ, ಕಣ್ಣುಗುq್ಡÉಯನ್ನು ಒತ್ತಿದಾಗ ನೋಟದ ಅರಿವು ಗೊತ್ತಾಗುವಂತೆ ಈ ಪಡೆಕಗಳನ್ನು ಯಾಂತ್ರಿಕವಾಗೂ ಚೋದಿಸಬಹುದು,. ಒತ್ತಡದ ಶಕ್ತಿಗಿಂತಲೂ ಬೆಳಕಿನ ಕಿರಣಗಳ ಶಕ್ತಿ ಅತೀ ಕಿರಿದು, ಇದನ್ನು ಸಾಕಷ್ಟು ಚೋದನೆ ಎನ್ನಬಹುದು. ಒಂದು ಗೊತ್ತಾದ ಪಡೆಕವನ್ನು ಯಂತ್ರ, ಕಾವು, ವಿದ್ಯುತ್ತು ಇತ್ಯಾದಿ ಯಾವ ವಿಧಾನದಿಂದಲೇ ಚೋದಿಸಲಿ, ಅದರ ಪರಿಣಾಮ ಯಾವಾಗಲೂ ಒಂದೇ, ನೋಟದ ಪಡೆಕಗಳಾದ ಸರಳು, ಸಂಕಗಳು ಚೋದನೆ ಅದಾಗಲೆಲ್ಲ ನೋಟದ ಅರಿವನ್ನೆ ಕೊಡುತ್ತವೆ. ಕಣ್ಣಿನ ನರವನ್ನು ಚೋದಿಸಿದರೆ ಬೆಳಕಿನ ಅರಿವು ಮೂಡುವುದೇ ಹೊರತು ಬೇರೇನೂ ಆಗದು. ಕಿವಿಯ ನರದಿಂದ ಆಲಿಕೆಯಾಗುತ್ತದೆ. ಇದನ್ನು ವಿಶಿಷ್ಟ ನರದ ಶಕ್ತಿಗಳ ಸಿದ್ಧಾಂತ ಎನ್ನುವುದುಂಟು. ಒಂದೊಂದು ಬಗೆಯ ಅರಿವಿನಲ್ಲೂ ಹಲವಾರು ಕಿರಿಯ ಬಗೆಗಳನ್ನು ಗುರುತಿಸಬಹುದು. ಎಚ್ಚರದಿಂದ ನಯವಾಗಿ ಧರ್ಮವನ್ನು ಚೋದಿಸಿದರೆ, ಚೋದಿಸಿದ ಗೊತ್ತಾದ ತಾವಿನಂತೆ ಒತ್ತಡ, ನೋವು, ಕಾವು, ತಂಪುಗಳ ಅರಿವುಗಳು ಏಳುತ್ತವೆ.

ಭೇದಗಾಣಿಕೆಯ ನಿಯಮದಂತೆ (ಲಾ ಆಫ್ ಕಾಂಟ್ರಾಸ್ಟ್) ನಮ್ಮ ಅರಿವುಗಳಲ್ಲಿ ಹೆಚ್ಚು ಕಡಿಮೆ ಆಗುವುದು. ಒಂದು ವಸ್ತುವಿನ ಹೂಳಪು, ಬಣ್ಣಗಳು ಅದೇ ಹೊತ್ತಿನಲ್ಲೋ ಅಮೇಲೊ ಕಣ್ಣಿಗೆ ಬೀಳುವ ಇನ್ನೊಂದರ ಹೊಳಪು, ಬಣ್ಣಗಳ ಅರಿವಿಗೆ ಅಡ್ಡಬರುತ್ತದೆ. ಕಣ್ಣು ಕೋರಿಸುವ ಏನ್ನನಾದರೂ ನೋಡಿ, ಬೇರೆಡೆ ಕಣ್ಣು ತಿರುಗಿಸಿದರೆ ಅದರ ಪೂರಕ (ಕಾಂಪ್ಲಿಮೆಂಟರಿ) ಬಣ್ಣವೂ ಹೊಳಪಿನ ಎದುರು ಮಟ್ಟವೂ ಎರಡನೆಯ ವಸ್ತುವಿನ ಬಣ್ಣ, ಹೊಳಪುಗಳೊಂದಿಗೆ ಬೆರೆಯುತ್ತವೆ. ಸುತ್ತಣದು ಕಪ್ಪಾಗಿದ್ದರೆ ನಡುವೆ ಇರುವ ಹೊಳೆವ ವಸ್ತು ಇನ್ನಷ್ಟು ಹೊಳೆವಂತೆ ತೋರುವುದು: ಪರಿಸರ ಹೊಳೆಯುತ್ತಿದ್ದರೆ ಕಪ್ಪು ವಸ್ತು ಇನ್ನೂ ಕಪ್ಪಾಗಿ ಕಾಣುವುದು. ಅಕ್ಕಪಕ್ಕಗಳಲ್ಲಿ ಇರಿಸಿದ ಬಣ್ಣಗಳೂ ಬೆರೆತಂತೆ ತೋರುವುವು. ಹೀಗೆ ತೋರಿಕೆಯಲ್ಲಿ ಅರಿವು ಬೇರೆಯಾಗಿ ಕಾಣಬಹುದು.

ಅರಿವಿನ ತೀವ್ರತೆಯನ್ನು ಗಮನಿಸಬಹುದು. ಒಂದು ನಾದ ಜೋರಾಗೋ ಮೆತ್ತಗೊ ಇರಬಹುದು. ತೀವ್ರತೆ ಹೆಚ್ಚಿದಷ್ಟೂ ಅರಿವಿನ ನರದಲ್ಲಿ ಸಾಗುವ ಆವೇಗಗಳೂ ಹೆಚ್ಚಿರುವುದರಿಂದ ಇದು ಗೊತ್ತಾಗುತ್ತದೆ. ಬಹಳ ಆವೇಗಗಳು ಮಿದುಳಿಗೆ ಹೋದಾಗ, ತೀವ್ರತೆ ತಿಳಿವುದು. ತೀವ್ರತೆ ಹೆಚ್ಚಿದಂತೆಲ್ಲ ಇನ್ನಷ್ಟು ಪಡೆಕಗಳ ಚೋದನೆ ಆಗುವುದು ಇನ್ನೊಂದು ರೀತಿ. ಅರಿವಿನ ತೀವ್ರತೆ ಬಲು ಕಡಿಮೆಯಾಗಿದ್ದರೆ ಗಮನ ಸೆಳೆಯದಿರಬಹುದು. ಬಲು ಬಲವಾದರೆ ಅರಿವೇ ಬದಲಾಗಿ ನೋವಾಗಬಹುದು. ಕಣ್ಣು ಕುಕ್ಕುವ ಬೆಳಕಿಂದ ಕಣ್ಣಿಗೆ ನೋವು ಆಗುವಂತೆ, ಗುಯ್ಗುಡಿಕೆ, ಕಚಗುಳಿಗಳಂತೆ ಅರಿವುಗಳು ತೀರ ದುರ್ಬಲವಾಗಿದ್ದರೆ ಬೇಡವೆನಿಸುತ್ತವೆ. ಅರಿವಿಗೆ ಬರಬೇಕಾದರೆ, ಒಂದೊಂದು ಚೋದನೆಯೂ (ಸ್ಟಿಮುಲಸ್) ಗೊತ್ತಾದ ಅವಧಿ ಉಳಿಯಬೇಕು. ಒಂದೇ ಚೋದನೆಯನ್ನು ಎಡೆಬಿಡದೆ ಮಾಡುತ್ತಿದ್ದರೆ, ಬರುಬರುತ್ತ ಅರಿವಿನ ತೀವ್ರತೆ ತಗ್ಗುತ್ತ ಹೋಗಿ ಕೊನೆಗೆ ನಿಂತೇ ಬಿಡಬಹುದು. ಒಂದೇ ಬಣ್ಣವನ್ನು ನೋಡುತ್ತಲೇ ಇದ್ದರೆ, ಆ ಬಣ್ಣ ಕುಂದುವಂತೆ ತೋರುತ್ತದೆ. ಬಟ್ಟೆಗಳನ್ನು ತೊಟ್ಟುಕೊಳ್ಳುವಾಗ ನಮಗೆ ತಾಕುವ ಅರಿವು ಇದ್ದರೂ ಆಮೇಲೆ ಅದು ನಮ್ಮ ಗಮನಕ್ಕೆ ಬರದಾಗುತ್ತದೆ. ಇದಕ್ಕೆ ಹೊಂದಾಣಿಕೆ (ಅಡಾಪ್ಟೇಷನ್) ಎಂದಿದೆ. ಪಡೆಕಗಳನ್ನು ಒಂದೇ ಸಮನಾಗಿ ಚೋದಿಸುತ್ತಿದ್ದರೆ ಅರಿವಿನ ನರದಲ್ಲಿ ಅವೇಗಗಳು ಹುಟ್ಟದಾಗಿ ಅಣಗುತ್ತವೆ. ಆದರೆ ಸದ್ದಿನ ಕೆಲವು ಅರಿವುಗಳು ಏರುವಂತೆ ತೋರುತ್ತ ನೋವಿಡುತ್ತವೆ.

ಇವೆಲ್ಲ ಲಕ್ಷಣಗಳಲ್ಲೂ ಬಲು ಮುಖ್ಯವಾದದು ಗುಣ. ಇವುಗಳ ಹೆಚ್ಚಿನ ನಿಜಗೆಲಸವೆಂದರೆ, ಅರಿವಿನ ಮರುವರ್ತನೆಯಾಗುವ ಚಲನೆ. ಈ ಚಲನೆ ತಂತಾನಾಗಿ ಹಿಮ್ಮುರಿವ (ರಿಫ್ಲೆಕ್ಸ್) ಇಲ್ಲವೇ ಬೇಕಾಗಿ ಮಾಡಿದ್ದಾಗಿರಬಹುದು. ಏನಾದರೂ ಸದ್ದಾದರೆ ಸರಕ್ಕನೆ ಹಾರಿ ಮುಂದಿನ ಕೆಲಸ ಕೈಗೊಳ್ಳಬಹುದು. ಇಂಥ ಬೇರೆ ಬೇರೆ ಚೋದನೆಗಳಿಂದ ಪರಿಸರದೊಂದಿಗೆ ನಾವು ಹೊಂದಿಕೊಂಡು ಮೇಲೆ ಬೀಳುವ, ಕಾಪಾಡಿಕೊಳ್ಳುವ ಇಲ್ಲವೇ ಓಡಿಹೋಗುವ ವರ್ತನೆ ತೋರಲು ಅರಿವುಗಳು ನಮಗೆ ನೆರವಾಗುತ್ತವೆ.

ಇಂದ್ರಿಯಗಳ ಚೋದನೆಯಾದರೆ ಒಂದು ವಸ್ತುವಿನ ಗುಣಕ್ಕಿಂತಲೂ ಹೆಚ್ಚಾಗಿ ವಸ್ತುವೇ ನಮ್ಮ ಗಮನಕ್ಕೆ ಬರುವುದು. ಇದರಿಂದಲೇ ಬಹುಪಾಲು ಅರಿವುUಳು ತಿಳಿಸಿಕೊಡುತ್ತವೆ. ನಮ್ಮ ಅನುಭವದಂತೆ ಅರಿವುಗಳಿಗೆ ನಾವು ಅರ್ಥಕೊಟ್ಟು ಬರುಬರುತ್ತ ನಮ್ಮ ಚಿಂತನೆ, ಬುದ್ದಿಗೆ ತಳಹದಿ ಹಾಕುವುದರಿಂದ, ಅರಿವುಗಳ ಮೂಲಕವೇ ಹೊರಗಣ ಪ್ರಪಂಚ ತಿಳಿವಳಿಕೆ ಬೆಳೆವುದು. ಪಡೆಕಗಳನ್ನು ಒಂದು ಚೋದನೆ ಚೋದಿಸಿದಾಗ ಎದ್ದ ಆವೇಗಗಗಳು ಆ ಪಡೆಕಗಳಿಗೆ ಸಂಬಂಧಿಸಿದ ಅರಿವಿನ ನರಗಳ ಮೂಲಕ ಸಾಗಿ ಕೊನೆಗೆ ಮಿದುಳಲ್ಲಿನ ಅರಿವಿನ ಪ್ರದೇಶವನ್ನು ಸೇರುತ್ತದೆ. ಈ ನರಗಳ ದಾರಿಯಲ್ಲಿ ಎಲ್ಲಿ ಚೋದಿಸಿದರೂ ಸರಿಯೆ ಅದರ ಅರಿವನ್ನು ಯಾವಾಗಲೂ ಆ ನರಗಳ ಪಡೆಕಗಳ ತಾವಿಗೇ ಸೂಚಿಸುತ್ತದೆ. ಇದನ್ನು ಚಾಚಿಕೆಯ ನಿಯಮ (ಲಾ ಆಫ್ ಪ್ರೊಜೆಕ್ಷನ್) ಎನ್ನುವುದುಂಟು. ಉದಾಹರಣೆಯಾಗಿ, ನೋವಿನ ಅರಿವನ್ನು ಹೊತ್ತು ಕೈಗಳಿಂದ ಮಿದುಳಿಗೆ ಹೋಗುತ್ತಿರುವ ಅರಿವಿನ ನರಗಳನ್ನು ಬೆನ್ನುಹುರಿಯಲ್ಲಿ ಚೋದಿಸಿದರೂ ಕೈಯಲ್ಲಿ ನೋವಿಡುವ ಅರಿವಾಗುತ್ತದೆ.

ಅರಿವಿನ ಮೂಲಗಳು : ಅರಿವುಗಳನ್ನು ಸಾಮಾನ್ಯವಾಗಿ ವಿಶೇಷ ಇಂದ್ರಿಯಗಳವು (ಸ್ಪೆಷಲ್ ಸೆನ್ಸಸ್), ಒಳಾಂಗಗಳವು (ವಿಸರಲ್) ಎಂದು ವಿಂಗಡಿಸಬಹುದು. ವಿಶೇಷದ ವರ್ಗದಲ್ಲಿ ಹೊಳಪು, ಬಣ್ಣಗಳ ನೋಟದವೂ; ದನಿ ನಾದಗಳ ಆಲಿಕೆಯವೂ; ವಾಸನೆ, ರುಚಿಗಳವೂ: ಮುಟ್ಟುವೆ, ಒತ್ತಡ, ಕಾವು, ತಂಪು ನೋವುಗಳ ಚರ್ಮದವೂ ಸೇರಿವೆ. ಒಳಾಂಗಗಳಲ್ಲಿ ಸ್ನಾಯು, ಕಂಡರ, ಕೀಲುಗಳಿಂದೇಳುವ (ಚರಿಕರಿವಿನವು-ಕೈನೀಸ್ತೇಟಿಕ್) ಅರಿವುಗಳೊಂದಿಗೆ ಬೇರೆ ಬೇರೆ ಒಳಗಣ ಅಂಗಗಳು ಎಚ್ಚರದ ತಿಳಿವಿಗೆ ಕಳುಹುವ ಸುದ್ದಿಗಳೂ ಇವೆ, ದಣಿವು, ಉತ್ಸಾಹ, ಬಾಯರಿಕೆ, ಹಸಿವು, ಲಿಂಗಚಿಂತನೆ, ಯಾರಿಗೂ ಬೇಕಿನಿಸದ ಓಕರಿಕೆ, ಶೂಲೆಗಳು ಇವೆಲ್ಲ ಒಳಾಂಗದ ಅರಿವುಗಳು. ಒಂದು ಅಂಗದಿಂದ ಏಳುವ ನೋವು ಹಲವೇಳೆ ಮೈಯಲ್ಲಿ ಇನ್ನೆಲ್ಲೊ ತೋರುವುದು. ಗುಂಡಿಗೆಯಲ್ಲಿನ ನೋವು ಎಡತೋಳಿನಲ್ಲಿ ಕಾಣಬಹುದು; ವಪೆಯದು ಬಲ ಹೆಗಲಲ್ಲಿ ತೋರುವುದು.

ಚರ್ಮದಲ್ಲಿ ಒಂದೊಂದು ಬಗೆಯ ಚೋದನೆಯೂ ಚರ್ಮದ ಹಲವಾರು ಅರಿವುಗಳಿಗೆ ಕಾರಣವಾಗುವುದು. ಯಾವ ನರದ ಅಂಗಾಂತ ಚೋದನೆಯಾಗಿದೆ ಎಂಬಂತೆ ಕೆಲವೆಡೆ ತಂಪು, ಕಾವು, ನೊವು ಇಲ್ಲವೆ ಒತ್ತಡ ತಿಳಿಯುತ್ತದೆ. ಆದರೆ ನಿಜವಾಗಿ ಏನನ್ನಾದರೂ ಮುಟ್ಟಿದರೆ, ಹೆಚ್ಚು ಭಾಗ ತಾಕುವುದರಿಂದ ಹಲತೆರನ ಅರಿವುಗಳೆದ್ದು ಕಾವು, ಗಡುಸು, ಮೆತುವು, ಒರಟುತನ, ನುಣುಪು, ತೇವ ಇತ್ಯಾದಿ ಒಂದೇ ಬಾರಿಗೆ ಗೊತ್ತಾಗುತ್ತವೆ. ಈ ಶತಮಾನದ ಮೊದಲಲ್ಲಿ ಚರ್ಮದ ಅರಿವುಗಳೆಲ್ಲ ಮುಟ್ಟುವ ಅರಿವಿನ ಬಗೆಗಳೆಂಬ ತಪ್ಪು ಕಲ್ಪನೆಯಿತ್ತು. ಕೆರೆತ, ಕಚಗುಳಿ ಇತ್ಯಾದಿ ಅರಿವುಗಳು ಚರ್ಮದಲ್ಲಿನ ನರಗಳ ಅಂಗಾಂತಗಳಲ್ಲಿ ಅಗುವ ರಕ್ತ ಹರಿವಿನ ವ್ಯತ್ಯಾಸಗಳಿಂದ ಆಗುತ್ತವೆ. ಚರ್ಮದ ಎಲ್ಲೆಡೆಗಳಲ್ಲೂ ಅರಿವುಗಳ ತಿಳಿವಳಿಕೆ ಒಂದೇ ಸಮನಾಗಿರದು. ಹಿಂಗೈಗಿಂತಲೂ ಬೆರಳ ತುದಿಗಳು ಚುರುಕಾಗಿರುತ್ತವೆ. ಎದೆಗಿಂತಲೂ ಬೆನ್ನು ಚರ್ಮ ಮಂದ. ನಾಲಗೆಯಲ್ಲಂತೂ ವ್ಯತ್ಯಾಸಗಳು ಬಲು ಚುರುಕಾಗಿ ಗೊತ್ತಾಗುತ್ತದೆ. ಜೀವಿಯನ್ನು ಕಾಪಿಡುವುದಕ್ಕಾಗಿ ಬಹುವಾಗಿ ಬೇಕಿರುವೆಡೆ ಅರಿವು ಬಲು ಚುರುಕು. ಮುಟ್ಟುವ ಅರಿವಿನಲ್ಲಿ ತಾಕಿದ ಜಾಗವನ್ನು ಖಚಿತವಾಗಿ ಗುರುತಿಸಬಹುದು.

ರುಚಿಯ ಮೂಲ ಅರಿವುಗಳು ನಾಲ್ಕು : ಹುಳಿ, ಉಪ್ಪು, ಕಹಿ ಮತ್ತು ಸಿಹಿ, ಉಳಿದ ರುಚಿಗಳು ಸಾಮಾನ್ಯವಾಗಿ ಇವುಗಳ ಬೆರಕೆ; ಕೆಲವೇಳೆ ಇವು ವಾಸನೆಯೊಂದಿಗೂ ಒಂದಿಷ್ಟು ಕೂಡಿರಬಹುದು. ಹುಟ್ಟಿದಾಗ ವಾಸನೆಯ ಅರಿವು ಬಲವಾಗಿರುತ್ತದೆ, ಮೂಗನ್ನು ಮುಚ್ಚಿಕೊಂಡರೆ, ನೆಗಡಿಯಿಂದ ಮೂಗು ಕಟ್ಟಿದರೆ ವಾಸನೆ ಕೆಟ್ಟು ರುಚಿಯೇ ಬೇರೆಯಾಗುತ್ತದೆ.
ಆರೋಗ್ಯದಲ್ಲಾಗಲೀ ಬೇನೆಯಲ್ಲಾಗಲಿ ಮೂಸುವ ಅರಿವು ಮಾನವನಲ್ಲಿ ಅಷ್ಟು ಮುಖ್ಯವಲ್ಲ. ವಾಸನೆಗಳನ್ನು ಗುರುತಿಸಲು ಯಾವುದರಿಂದ ಬಂದಿತೆಂದು ಹೇಳುತ್ತೇವೆ. ಒಳ್ಳೆಯದು ಕೆಟ್ಟದೆಂದು ಮಾತ್ರ ವಿವರಿಸುವೆವು. ಸುಮಾರು ಏಳನೆಯ ವರುಷದ ತನಕ ವಾಸನೆಯ ಅರಿವುಗಳ ವ್ಯತ್ಯಾಸಗಳು ಅಷ್ಟಾಗಿ ಗೊತ್ತಾಗವು.  (ನೋಡಿ- ವಾಸನೆ-ಮತ್ತು-ರುಚಿ)
ಹುಟ್ಟಿದ ಕೂಡಲೇ ಆಲಿಸುವ ಅರಿವುಗಳು ತೊರುತ್ತವೆ. ಎತ್ತರದ ಮಟ್ಟದ ಸದ್ದುಗಳು ಮೊದಲು ಗೊತ್ತಾಗುತ್ತವೆ. ಅಂಥ ಅರಿವುಗಳು ಕ್ರಮವಾದ ಅಲೆಗಳಲ್ಲಿ ಕಿವಿಯ ಮೇಲೆ ಬಿದ್ದರೆ ಗೊತ್ತಾದ ನಾದವಾಗಿರುವುದು. ಕ್ರಮಗೆಟ್ಟಿದ್ದರೆ ಸದ್ದು ಎನಿಸುವುದು. ಆಲಿಕೆಯಲ್ಲಿ ಬೇರೆ ಬೇರೆ ಸ್ವರಗಳನ್ನು ಗುರುತಿಸುವುದಲ್ಲದೆ ಯಾವ ದಿಕ್ಕಿಂದ ಬಂದಿದೆ ಎಂದೂ ತಿಳಿಯಬಹುದು. (ನೋಡಿ- ಕೇಳುವಿಕೆ) ಒಳಗಿವಿಯಲ್ಲಿ ಅರೆಸುತ್ತಿನ ಸಾಗಾಲುವೆಗಳೂ (ಸೆಮಿಸಕ್ರ್ಯುಲರ್ ಕೆನಾಲ್ಸ್) ಒಂದಿಷ್ಟು ಎದೆಬಲದ (ಸ್ಟ್ಯಾಟಿಕ್) ಅರಿವುಗಳಿಗೆ ಮೂಲವಾಗುತ್ತವೆ. ಇದೆ ಆಳದರಿವು (ಪ್ರೋಪ್ರಿಯೋಸೆಪ್ಷನ್), ಮೈ ಇರವು, ಸಮತೋಲಗಳ ಈ ತಿಳಿವನ್ನು ಕೊಡಲು ಕಣ್ಣೂ ಕಿರ್ಮಿದುಳೂ (ಸೆರಿಬೆಲ್ಲಂ) ನೆರವಾಗುತ್ತವೆ, ಗಾಡಿಲ್ಲೋ ಎತ್ತುಗೆಯಲ್ಲೋ (ಲಿಫ್ಟ್) ಹೋಗುವಾಗ ಆಗುವಂತೆ ಮೈ ಅಲುಗಾಡುವಾಗ ಇಂಥ ಅರಿವು ತಿಳಿಯುತ್ತದೆ. ಉಯ್ಯಾಲೆ, ಮೋಟಾರು, ವಿಮಾನ, ಹಡಗುಗಳಲ್ಲಿ ಸುತ್ತಿದಂತೆ, ಆಗಾಗ ತಲೆ ತಿರುಗಿದಂತಾಗಿ ಮೈ ಸಮತೋಲ ತಪ್ಪುವುದೂ ಇದರಿಂದಲೇ; ಓಕರಿಕೆ, ನರಳಿಕೆ, ವಾಂತಿ ಆಗುತ್ತದೆ.
ನೋಟದಲ್ಲಿ, ಬೆಳಕು, ಕತ್ತಲೆಗಳೇ ಅಲ್ಲದೆ ಬಗೆಬಗೆಯ ಬಣ್ಣಗಳನ್ನೂ ಗುರುತಿಸಬಹುದು. ಬಹುಮಟ್ಟಿಗೆ ಇವೆರಡೂ ಬೆರೆತಿರುತ್ತದೆ. ಕೆಂಪು, ಹಳದಿ, ಹಸುರು, ನೀಲಿ ಮೂಲಬಣ್ಣಗಳು. ಉಳಿದವೆಲ್ಲಿ ಇವುಗಳ ಬೆರೆಕೆಗಳು, ಕೆಲವರಿಗೆ ಕೆಲವು ಬಣ್ಣಗಳು ಅರಿವಿಗೆ ಬಾರದೆ ಬಣ್ಣಗುರುಡಾಗಿರುವರು (ನೋಡಿ- ನೋಟ)  ಪೂರ್ತಿ ಬಣ್ಣಗುರುಡಾಗಿದ್ದರೆ, ಎಲ್ಲ ಬಣ್ಣಗಳೂ ಬಿಳೀ, ಬೂದು ಕಪ್ಪುಗಳಾಗಿ ತೋರುತ್ತವೆ. ನೋಟದ ಅರಿವಿನಲ್ಲಿ ತರುವಾಯಿನ ಬಿಂಬಗಳು (ಆಫ್ಟರ್ ಇಮೇಜಸ್) ತೋರುವುದು ವಿಶೇಷ. ಕೋರೈಸುವ ಬೆಳಕನ್ನು ನೋಡಿ ಕಣ್ಣು ಮುಚ್ಚಿಕೊಂಡರೂ ತುಸು ಹೊತ್ತು ಬೆಳಕಿನ ಅರಿವು ಉಳಿವುದು. ಹಾಗೇ ಒಂದು ಬಣ್ಣವನ್ನೇ ನೋಡುತ್ತಿದ್ದರೆ ತರುವಾಯಿನ ಬಿಂಬ ಪೂರಕ(ಬಣ್ಣದಲ್ಲಿ ಇರುತ್ತದೆ; ನೀಲಿ ಬಣ್ಣ ಕಂಡಿದ್ದರೆ ಹಳದಿ ಉಳಿವುದು.

ಕೈಕಾಲುಗಳೂ ಮೈಯೂ ಯಾವ ಭಂಗಿ ಇರುವುಗಳಲ್ಲಿವೆ ಎಂದು ತಿಳಿಸಿಕೊಡಲು, ಚರ್ಮದಾಳದಲ್ಲಿ ಸ್ನಾಯು, ಕಂಡರಗಳಿಂದ ಎಲುಬುಗಳ ರಚಗಟ್ಟುಗಳಿಂದ ಏಳುವ ಚರಿಕರಿವಿನ (ಕೈನೀಸ್ತಟಿಕ್) ಅರಿವುಗಳಿವೆ. ಕಣ್ಣಿಂದ ನೋಡದಿದ್ದರೂ ಕೈಯಲ್ಲಿಟ್ಟ ವಸ್ತುಗಳ ವಿಚಾರದಾಗಿನ ತಿಳಿವಳಿಕೆಗೂ (ಘನದರಿವು-ಸ್ಟೀರಿಯೊಗ್ನೋಸಿಸ್) ಇವೇ ಕಾರಣ. ಒಂದಕ್ಕೂ ಹೆಚ್ಚು ಬಗೆಗಳ ಅರಿವುಗಳು ಒಂದುಗೂಡಿ ಘನದರಿವು ಆಗುತ್ತದೆ. ಇದೊಂದು ಒಂಗೂಡಿಕ (ಸಿಂತೆಟಿಕ್) ಅರಿವು. ಕಚಗುಳಿ, ತುರಿಕೆ, ಸೀನು, ಅಕಳಿಕೆ ಇಂಥವೇ. ಮೈಯೊಳಗಣ ಸ್ಥಿತಿಯನ್ನು ತಿಳಿಸಿಕೊಡುವ ಒಳಾಂಗಗಳ ಅರಿವುಗಳು ಬಾವ, ಉದ್ವೇಗಗಳಿಗೆ ನಿಕಟವಾಗಿ ಸಂಬಂಧಿಸಿರಬಹುದು. ಕೋಪ, ಮುನಿಸು, ಚಿಂತೆ, ಕಳವಳಗಳಲ್ಲಿ ಮೈಗೆ ಕಸಿವಿಸಿ ಆಗುವುದರ ಕಾರಣ ಇವೆ. ಅದಿರಿಕ ಅರಿವೂ ಒಂದಿದೆ. ಮೂಳೆಯ ಮೇಲೆ ಇರಿಸಿದ ಅದಿರುತ್ತಿರುವ ದನಿಸಿಕ ಕವೆಯಿಂದ(ಟ್ಯೂನಿಂಗ್‍ಫೋರ್ಕ್) ಇದು ಗೊತ್ತಾಗುವುದು. ಒತ್ತಡ ಬಿಟ್ಟು ಬಿಟ್ಟು ಬೀಳುವುದರಿಂದ ಹೀಗಾಗುತ್ತದೆ.

ಕೆಲವರಲ್ಲಿ ಹಲವಾರು ಅರಿವುಗಳು ಸೋಜಿಗವಾಗಿ ಬೆರೆಯುತ್ತವೆ. ಒಂದು ಅರಿವಿನ ಚೋದನೆಯಾದರೆ, ತಿಳಿವಿಗೆ ಬರುವುದು ಇನ್ನೊಂದು. ಇದಕ್ಕೆ ಕೊಡರಿವು (ಸೈನೀಸ್ತೀಸಿಯ) ಎಂದಿದೆ. ಸಂಗೀತ ಕೇಳುತ್ತಿದ್ದರೆ ಕೆಲವರಿಗೆ ಬಣ್ಣಗಳ ಅರಿವಾಗುವುದು.

ಅರಿವೀಡುತನ: ಕಣ್ಣು, ಕಿವಿ. ಚರ್ಮ, ನಾಲಗೆ, ಮೂಗು, ಒಳಾಂಗಗಳಿಂದ ಎಡೆಬಿಡದೆ ಸುದ್ದಿಗಳು ಮಿದುಳಿಗೆ ಸಾಗುತ್ತಿರುವುದರಿಂದ ಮಾನವನಿಗೆ ಪರಿಸರದ ತಿಳಿವಳಿಕೆ ಆಗುತ್ತದೆ. ಈ ಸುದ್ದಿಗಳನ್ನು ತಿಳಿವ ಬಲವೇ ಅರಿವೀಡುತನ (ಸೆನ್ಸಿಬಿಲಿಟಿ). ಈ ಬಲ ಒಬ್ಬೊಬ್ಬರಲ್ಲಿ ಒಂದೊಂದು ತರ. ಕಿವಿಯಿಂದ ಕೆಳುವುದನ್ನೇ ತೆಗೆದುಕೊಂಡರೆ ಎಲ್ಲೆಲ್ಲೂ ಸದ್ದಿಲ್ಲದಾಗ ನಾಲ್ಕೈದು ಕಿಲೊಮೀಟರುಗಳ ದೂರದಲ್ಲಿ ಪಟಾಕಿ ಹಾರಿಸಿದ್ದನ್ನು ಬಹಳ ಮಂದಿ ಕೇಳಿಸಿಕೊಳ್ಳಬಲ್ಲರು. ಇನ್ನು ಕೆಲವರು ಇನ್ನೂ ದೂರದ್ದನ್ನು ಕೇಳಿಸಿಕೊಳ್ಳುವರು, ನೋವು, ಬೆಳಕು, ಒತ್ತಡಗಳ ಅರಿವುಗಳಲ್ಲೂ ಅಷ್ಟೆ, ನೋವು, ಮುಟ್ಟುವಿಕೆಗಳಿಗೆ ಮೈದುಡಿತದ ಕೂಲಿ ಆಳುಗಳಿಗಿಂತ ಪಟ್ಟಣಿಗರೇ ಸುಲಭವಾಗಿ ಈಡಾಗುವರು: ಓದಿದವರೂ ಕರಿಯರಿಗಿಂತ ಬಿಳಿಯರೂ ಈಡಾಗುವರ, ಉಪ್ಪು ಒಂದನ್ನು ಬಿಟ್ಟರೆ ರುಚಿ ಕಂಡುಕೊಳ್ಳುವುದರಲ್ಲಿ ಹೆಂಗಸರೇ ಮುಂದು; ವಾಸನೆ, ಆಲಿಕೆಗಳಲ್ಲಿ ಗಂಡಸರು ಮುಂದು, ಅಂತೂ ಒಬ್ಬರದಿದ್ದಂತೆ ಇನ್ನೊಬ್ಬರ ಕಾಣ್ಕೆ ಇರದು. ಒಬ್ಬರಲ್ಲೇ ಒಂದೊಂದು ಹೊತ್ತಿನಲ್ಲಿ ಒಂದೊಂದು ತೆರ. ಅರಿವೀಡುತನ ದಣಿವಾದಾಗ, ನಿದ್ದೆ ಬರುವಾಗ ಕುಂದಿರುವುದು, ಬಲು ಚಳಿಯಲ್ಲೂ ಅಷ್ಟೇ. ಅರಿವುಗಳಲ್ಲಿ ವಿಶೇಷವಾಗಿ ಮನಸ್ಸಿಟ್ಟರೆ ಅರಿವಿಗೆ ಈಡಾಗುವುದೂ ಹೆಚ್ಚುತ್ತದೆ.

ಮಿದಿಳಿನ ರೋಗಗಳಲ್ಲಿ ಅರಿವೀಡುತನ ಏರುಪೇರಾಗುವುದು. ಕೆಲವು ಹುಚ್ಚರು 45'-50' ದೂರದಲ್ಲಿ ಪಿಸುಮತಾಡಿದ್ದನ್ನೂ ಕೇಳಿಸಿಕೊಳ್ಳುವರು. ಉನ್ಮಾದವೇರಿದ ಹುಡುಗಿಯರೂ ಸದ್ದುಗಳಿಗೆ ಅಷ್ಟೇ ಸುಲಭವಾಗಿ ಈಡಾಗುತ್ತಾರೆ. ಮೊಲ್ಲಾಗರ ರೋಗಿಗಳಲ್ಲಿ ಇದರ ಅದಲು ಬದಲು, ವಾಸನೆ, ಬಣ್ಣಗಳಲ್ಲಿ ತುಸು ಬದಲಾದರೆ ಅವರಿಗೇನೂ ಗೊತ್ತಾಗದು.
ಅರಿವುಗಳಲ್ಲೆಲ್ಲ ರೋಗಿಗಳಲ್ಲಿ ಸಾಮಾನ್ಯ ಲಕ್ಷಣವಾಗಿ ವೈದ್ಯನಿಗೆ ನಿದಾನದಲ್ಲಿ ಬಹು ನೆರವಾಗುವುದು ನೋವಿನ ಅರಿವು, ಮೈಯಲ್ಲಿನ ಜೀವಕಣಗಳಿಗೆ ಕೆಡುಕಾದಾಗ, ಪೆಟ್ಟಾದಾಗ ನೋವು ಕಾಣಿಸಿಕೊಳ್ಳುತ್ತದೆ. ನೋವು ಕಾನಿಸಿಕೊಳ್ಳಲು ಇಂತಿಷ್ಟೇ ಚೋದಿಸಬೇಕೆಂದಿಲ್ಲ. ಉತಕಗಳಿಗೆ (ಟಿಷ್ಯೂಸ್) ಅಪಾಯವಾಗುವಷ್ಟು ಬಲವಾಗಿದ್ದರೆ ಸಾಕು. ನೋವು ತೋರುವುದು, ಉಳಿದ ಅರಿವುಗಳಿಗಾಗಿ ಇರುವಂತೆ ನೋವಿನ ಪಡೆಕಗಳು ಬೇರೆಯಾಗಿ ವಿಶೇಷದವಿಲ್ಲ. ನರಗಳ ಬಿಡಿಯಾದ ತುದಿಗಳೇ ನೋವಿನ ಪಡೆಕಗಳು. ತರಚಲು, ಜಜ್ಜುಗಾಯಗಳಲ್ಲಿ ಇದು ಜೋರಾಗಿ ತೋರುತ್ತದೆ.

ಬೇನೆಬಿದ್ದವರಲ್ಲಿ ಅರಿವೀಡುತನವನ್ನು ಕುಂದಿಸಬೇಕಾಗುವುದು. ಇದಕ್ಕಾಗಿ ಹಲವಾರು ವಿಧಾನಗಳಿವೆ. ಹಲ್ಲು ಕೀಳುವಾಗ ಮಾಡುವಂತೆ, ಮೈಯಲ್ಲಿ ಎಲ್ಲದರೂ ಒಂದೆಡೆ ಇದು ಇಲ್ಲವಾಗಿಸಲು, ಆ ಜಾಗದ ಸುತ್ತಲೂ ಕೋಕೆಯ್ನಂಥ ತಾವಿನ ಅರಿವಳಿಕವನ್ನು (ಅನೀಸ್ತೆಟಿಕ್) ಚುಚ್ಚಬಹುದು. ತತ್ಕಾಲ ಮಾತ್ರ ಎಚ್ಚರ ಕಳೆಯಲು ಈಥರಿನಂಥ ಒಂದು ಸಾಮಾನ್ಯ ಅರಿವಳಿಕವನ್ನೇ ಕೊಡಬಹುದು. ನಿದ್ದೆಗೇಡು, ಬಲು ಕಳವಳ, ನರನಿತ್ರಾಣಗಳಲ್ಲಿ ಎಂದಿನ ಸಾಮಾನ್ಯ ಅರಿವುಗಳನ್ನು ರೋಗಿಯ ಅರಿವ ಬಲವನ್ನು ಕೆಲವೇಳೆ ಕುಂದಿಸದೆಯೇ ಅರಿವೀಡುತನವನ್ನು ತಗ್ಗಿಸಬೇಕಾಗುತ್ತದೆ. ಶಮನಿಕಗಳು ಇದಕ್ಕೆ ಒಳ್ಳೆಯದು.
(ಎಂ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ